Photos of R S Iyer Tumkur

*ಆರ್.ಎಸ್.ಅಯ್ಯರ್ ಫೋಟೋಗಳು :- http://rsiyertumkur.blogspot.com *ಡಿವಿಜಿ ನೆನಪು ಕಾರ್ಯಕ್ರಮ:-https://sarasdvgnenapu.blogspot.com *ವಿಶ್ವನಾಥನ್ ಪತ್ರಗಳು https://vishwanathanletters.blogspot.com

Tuesday 19 December 2023

ಪಾಲಿಕೆ ವ್ಯಾಪ್ತಿ ವಿಸ್ತರಣೆ ಅಪ್ರಸ್ತುತ - Facebook - 19-12-2023- Palike Limits Expansion









 




------------------




**********************************

ಪಾಲಿಕೆ ವ್ಯಾಪ್ತಿ ವಿಸ್ತರಣೆ ಅಪ್ರಸ್ತುತ

-------------------------------------
ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸುವುದಾಗಿ ಅಂದರೆ ಮಲ್ಲಸಂದ್ರದವರೆಗೆ ವಿಸ್ತರಣೆ ಮಾಡುವುದಾಗಿ ರಾಜ್ಯದ ಗೃಹ ಸಚಿವರೂ ಆಗಿರುವ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಹೇಳಿರುವುದು ಅಪ್ರಸ್ತುತವಾಗಿದೆ. ಮೊದಲಿಗೆ ಈ ಕೆಳಕಂಡ 11 ಅಂಶಗಳ ಬಗ್ಗೆ ಚರ್ಚೆ ಆಗಲಿ.
1 ) ಪಾಲಿಕೆಯು ಈಗ 35 ವಾರ್ಡ್ ಗಳನ್ನು ಹೊಂದಿದೆ. ಈಗಿರುವ ವಾರ್ಡ್ ವ್ಯಾಪ್ತಿಗಳೇ ಅವೈಜ್ಞಾನಿಕವಾಗಿದೆ. ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಬಡಾವಣೆಗಳನ್ನು ಜೋಡಿಸಲಾಗಿದೆ. ವಾರ್ಡ್ ಗಳ ಜನಸಂಖ್ಯೆಯಲ್ಲೂ ಅಂತರಗಳಿವೆ. ಒಂದು ದೊಡ್ಡದು, ಒಂದು ಚಿಕ್ಕದು ಎಂಬಂತಿವೆ.
2 ) ನಗರಸಭೆ ಇದ್ದಾಗ ಸುತ್ತಮುತ್ತಲಿನ ಸುಮಾರು 22 ಹಳ್ಳಿಗಳನ್ನು ಸೇರ್ಪಡೆ ಮಾಡಲಾಗಿತ್ತು. ಮಹಾನಗರ ಪಾಲಿಕೆಯಾಗಿ ದಶಕ ಕಳೆದರೂ, ಹೊರವಲಯದ ವಾರ್ಡ್‌ ಗಳ ಅಭಿವೃದ್ಧಿ ಬಗೆಗಿನ ತಾರತಮ್ಯದ ಕೂಗು ಈಗಲೂ ಪಾಲಿಕೆ ಸಭೆಗಳಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ.
3) ವಾರ್ಷಿಕ ಸುಮಾರು 250 ಕೋಟಿ ರೂ. ಬಜೆಟ್ ಮಂಡಿಸುವ ಪಾಲಿಕೆಯು ಬಹುತೇಕ ಸರಕಾರಿ ಅನುದಾನವನ್ನೇ ಅವಲಂಬಿಸಿಕೊಂಡಿದೆ. ಸ್ವಯಂ ಸಂಪನ್ಮೂಲ ಕ್ರೋಢಿಕರಣದಲ್ಲಿ ಯಶಸ್ಸು ಸಾಧಿಸಲಾಗಿಲ್ಲ. ಒಂದು ಬೀದಿದೀಪ ಅಳವಡಿಕೆಗೂ ಪರಿತಪಿಸುವ ಸ್ಥಿತಿ ಇತ್ತು. ಅದೃಷ್ಟವಶಾತ್ ಒಂದು ಸಾವಿರ ಕೋಟಿ ರೂ.ಗಳ “ಸ್ಮಾರ್ಟ್ ಸಿಟಿ” ಯೋಜನೆ ಬಂದುದರಿಂದ, ತುಮಕೂರು ನಗರ ಬದಲಾವಣೆ ಕಂಡಿದೆ. ನಗರಾದ್ಯಂತ ಹಲವು ರಸ್ತೆಗಳು ಅಭಿವೃದ್ಧಿ ಆಗಿವೆ. ಬೀದಿದೀಪಗಳು ಅಳವಡಿಸಲ್ಪಟ್ಟಿವೆ. ಪಾರ್ಕ್ ಗಳು ಹೊಸರೂಪದಿಂದ ನಳನಳಿಸುತ್ತಿವೆ. ಅಕಸ್ಮಾತ್ “ಸ್ಮಾರ್ಟ್ ಸಿಟಿ” ಯೋಜನೆ ಇಲ್ಲದಿದ್ನರೆ ನಗರದಲ್ಲೊಂದು ಚರಂಡಿ ರಿಪೇರಿಯೂ ಪಾಲಿಕೆಗೆ ಕಷ್ಟವಾಗುತ್ತಿತ್ತು.
4 ) ಪಾಲಿಕೆ ಆಗುವಾಗ ಅಸ್ತಿತ್ವಕ್ಕೆ ತಂದಿದ್ದ ಮೂರು “ವಲಯ ಕಚೇರಿ”ಗಳನ್ನೂ ಮುಚ್ಚಲಾಗಿದೆ. “ವಾರ್ಡ್ ಸಮಿತಿ”ಗಳ ಅಸ್ತಿತ್ವ, ಕಾರ್ಯವೈಖರಿ ನಿಗೂಢವಾಗಿದೆ.
5 ) ಪಾಲಿಕೆಗೆ ಅದರದ್ದೇ ಆದ ಅಧಿಕಾರಿ-ನೌಕರರ ದೊಡ್ಡ ಜಾಲವೇ ಇರುತ್ತದೆ. ಅಂದರೆ ಸಿಬ್ಬಂದಿ ಸಂಖ್ಯೆ ಏರಿಕೆಯಾಗುತ್ತದೆ. ಆದರೆ ಈ ಪಾಲಿಕೆಯಲ್ಲಿ ಎಲ್ಲೋ ಕೆಲ ಪ್ರಮುಖ ಹುದ್ದೆಗಳಿಗೆ ಅಧಿಕಾರಿ-ನೌಕರರು ಪ್ರಭಾವ ಬೀರಿಕೊಂಡು ಬಂದು-ಹೋಗುತ್ತಿದ್ದಾರೆಯೇ ವಿನಃ, ನಿಗದಿತ ರೀತಿಯಲ್ಲಿ ಅವಕಾಶವಿರುವ ಎಲ್ಲ ಸಿಬ್ಬಂದಿಗಳ ನಿಯೋಜನೆಯೇ ಆಗಿಲ್ಲ.
6 ) ಪಾಲಿಕೆಯಾಗಿ ಬದಲಾದಾಗಿನಿಂದಲೂ ಪಾಲಿಕೆಯ ಆಡಳಿತದಲ್ಲಿ ದೊಡ್ಡ ಸುಧಾರಣೆಯೇನೂ ಆಗಿಲ್ಲ. ಅದರಲ್ಲೂ ಕಂದಾಯ ಶಾಖೆಯಂತೂ ಅನಿಯಂತ್ರಿತವೆಂಬ ದೂರು ನಿರಂತರ. ಕಂದಾಯ ಪಾವತಿಯ ದಾಖಲಾತಿಗಳ ನಿರ್ವಹಣೆ ಲೋಪದೋಷಗಳಿಂದಾಗಿ ತೆರಿಗೆ ಪಾವತಿಸುವ ಸಾರ್ವಜನಿಕರು ಪಡುತ್ತಿರುವ ವೇದನೆ, ಅಲೆದಾಟ, ಕಿರಿಕಿರಿ, ಸಂಕಟಗಳಂತೂ ಹೇರಳ. ಪಾಲಿಕೆಯ ಪ್ರತಿ ಸಭೆಯಲ್ಲೂ ದೂರು ಇದ್ದದ್ದೇ.
7 ) ಕಸ ವಿಲೇವಾರಿ ಈಗಲೂ ಕಗ್ಗಂಟು. ದಿನವೂ ಮನೆ-ಮನೆ ಕಸ ಸಂಗ್ರಹಿಸಬೇಕೆಂಬುದು ನಿಯಮ. ಆದರೆ ಕೆಲವು ವಾರ್ಡ್ ಗಳಲ್ಲಿ ಇದು ಜಾರಿಯಾಗುತ್ತಿಲ್ಲ. ವಾರಕ್ಕೆ ಮೂರು ಬಾರಿ ಮಾತ್ರ ಕಸ ಸಂಗ್ರಹ ಆಗುತ್ತಿದೆ. ನಗರಾದ್ಯಂತ ರಸ್ತೆ ಬದಿ ಕಸದ ರಾಶಿ ಬೀಳುತ್ತಲೇ ಇರುತ್ತದೆ. ರಾಜಕೀಯ ಪಕ್ಷಗಳ/ ವಿವಿಧ ಸಂಘಟನೆಗಳ ಫ್ಲೆಕ್ಸ್ ಹಾವಳಿ, ಬಂಟಿಂಗ್ಸ್ ಹಾವಳಿ ಅಸಹ್ಯಕರವಾಗಿದ್ದು, ನಗರದ ಸೌಂದರ್ಯವನ್ನೇ ಹಾಳುಮಾಡುತ್ತಿದೆ. ಆದರೂ ಪಾಲಿಕೆ ಅಸಹಾಯಕವಾಗಿದೆ.
8 ) ನಗರದ ಪ್ರಮುಖ ಬಡಾವಣೆಗಳಲ್ಲೇ ಇನ್ನೂ ಸಹಾ ಡಾಂಬರು ಕಾಣದ ಮಣ್ಣಿನ / ಜಲ್ಲಿ ಕಲ್ಲಿನ ರಸ್ತೆಗಳಿವೆ. ಇನ್ನು ಹೊರವಲಯದ ವಾರ್ಡ್ ಗಳ ಪರಿಸ್ಥಿತಿ ಹೇಗಿರಬಹುದು?
9 ) ನಗರಕ್ಕೆ ಹೊಂದಿಕೊಂಡಿರುವ ಬೆಳಗುಂಬ, ಮಂಚಕಲ್ ಕುಪ್ಪೆ, ಹಿರೇಹಳ್ಳಿ, ಗೂಳೂರು, ಅಂತರಸನಹಳ್ಳಿ, ಯಲ್ಲಾಪುರ, ಅರಕೆರೆ, ಕೋರಾದಂತಹ ಪ್ರಮುಖ ಸ್ಥಳಗಳನ್ನು ಬಿಟ್ಟು, ಕೇವಲ ಮಲ್ಲಸಂದ್ರದತ್ತ ಮಾತ್ರ ಪಾಲಿಕೆಯ ವಿಸ್ತರಣೆಗೆ ಕಣ್ಣಿಟ್ಟಿರುವುದು ಅತಾರ್ಕಿಕವಾಗಿದೆ.
10 ) ಹಿರೇಹಳ್ಳಿಯಲ್ಲಿ, ಸತ್ಯಮಂಗಲದಲ್ಲಿ, ವಸಂತನರಸಾಪುರದಲ್ಲಿ, ಅಂತರಸನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶಗಳಿದ್ದು, ಅಂತಹ ಪ್ರದೇಶಗಳನ್ನು ಸೇರ್ಪಡೆ ಮಾಡಿದರೆ, ಪಾಲಿಕೆಯ ಸಂಪನ್ಮೂಲ ಅಧಿಕವಾಗುವುದರಲ್ಲಿ ಸಂಶಯವಿಲ್ಲ. ಅವೆಲ್ಲ ಬಿಟ್ಟು ಕೇವಲ ಮಲ್ಲಸಂದ್ರದತ್ತ ಮಾತ್ರ ಎಂಬುದು ತಪ್ಪು ನಿರ್ಧಾರವಾಗುತ್ತದೆ.
11 ) ಇವೆಲ್ಲಕ್ಕೂ ಮಿಗಿಲಾಗಿ ಈಗ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿರುವ ಪ್ರದೇಶಗಳನ್ನು ತುಮಕೂರು ಪಾಲಿಕೆ ವ್ಯಾಪ್ತಿಗೆ ತರುವುದಾದಲ್ಲಿ, ಗ್ರಾಮಾಂತರ ಕ್ಷೇತ್ರದ ನಕ್ಷೆಯಲ್ಲಿ ಬದಲಾಗುತ್ತದೆಯೇ?
-ಆರ್.ಎಸ್.ಅಯ್ಯರ್, ತುಮಕೂರು, ದಿ. 19-12-2023